ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಋತುಪರ್ಣನನ್ನು ಕಾಣುವಾಗ ನೆನಪಾಗುವುದು ರೈಗಳು!

ಲೇಖಕರು :
ರಾಕೇಶ್ ಕುಮಾರ್ ಕಮ್ಮಜೆ
ಸೋಮವಾರ, ಜುಲೈ 15 , 2013

ನಮ್ಮ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳೆಂಬ ಎರಡು ಜಿಲ್ಲೆಗಳಿವೆಯಲ್ಲ ನಿಜಕ್ಕೂ ಇವು ಕಲಾಮಾತೆಯ ರಂಗಭೂಮಿಯೇ ಹೌದು. ನೀವು ಬೇಕಾದರೆ ಯೋಚಿಸಿ ನೋಡಿ. ನೃತ್ಯ, ನಾಟಕ, ಸಂಗೀತ…ಹೀಗೆ ಎಲ್ಲವೂ ಇಲ್ಲೇ ಮನೆಮಾಡಿವೆ. ಯಕ್ಷಗಾನವಂತೂ ಇಲ್ಲಿ ಅಬ್ಬರಿಸಿ ಕುಣಿಯುತ್ತದೆ. ಈಗ ಯಕ್ಷಗಾನ ತುಸು ಕಳೆಗುಂದಿದಂತೆ ಕಾಣುತ್ತಿರುವುದು ಹೌದಾದರೂ ಒಂದು ಕಾಲದಲ್ಲಿ ಈ ಎರಡೂ ಕನ್ನಡಗಳ ಯಾವುದೇ ಮನೆಯ ಮುಂದೆ ಹೋಗಿ ಚೆಂಡೆ ಬಾರಿಸಿದರೂ ಅಲ್ಲೊಬ್ಬ ಕಲಾವಿದನ ಪ್ರವೇಶವಾಗುತ್ತಿತ್ತು! ಅಂಥ ಸಮೃದ್ಧ ಸಿರಿಯ ಬೀಡು ಈ ಎರಡು ಕನ್ನಡಗಳು! ತಮಾಷೆಯೆಂದರೆ ಈಗಲೂ ಹಿರಿಯರೆಲ್ಲಾ ಒಂದೆಡೆ ಕೂತು ಮಾತನಾಡಲು ತೊಡಗಿದರೆ ಮಾತಿನ ಮಧ್ಯದಲ್ಲಿ ಯಕ್ಷಗಾನದ ಪ್ರವೇಶ ಆಗದಿರದು. ತೀರಾ ಇತ್ತೀಚೆಗಿನ ತಲೆಮಾರನ್ನು ಬಿಟ್ಟರೆ ಎಲ್ಲರೂ ಯಕ್ಷಗಾನದ ಹುಚ್ಚರೇ!

ಅಳಿಕೆ ರಾಮಯ್ಯ ರೈಗಳು
ಬರೀ ದಕ್ಷಿಣ ಕನ್ನಡವನ್ನೇ ಬೇಕಾದರೂ ಗಮನಿಸಿ. ಯಾವ ಮನೆಯಲ್ಲಿ ಕಲಾವಿದ ಇಲ್ಲ ಹೇಳಿ? ಒಂದೊಮ್ಮೆ ಈಗ್ಗೆ ಐದಾರು ವರ್ಷಗಳಿಂದ ಇಲ್ಲದಿದ್ದರೂ ಈ ಹಿಂದೆ ಇರಲಿಲ್ಲವಾ ಕೇಳಿ. ಖಂಡಿತ ಪ್ರತಿ ಮನೆಯಲ್ಲೂ ಒಂದೊಂದು ಅಸಾಧಾರಣ ಪ್ರತಿಭೆ ಲಂಗರು ಹಾಕಿ ಕೂತಿರುತ್ತಿತ್ತು. ಎಲ್ಲೋ ಗ್ರಾಮೀಣ ಪ್ರದೇಶದ ಯಾವುದೋ ಮೂಲೆಯಲ್ಲೂ ಯಕ್ಷಗಾನದ ಧೀಂಕಿಟ! ಭಾಗವತಿಕೆಯ ಇಂಪು!

ನಿಮಗೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅಳಿಕೆಯ ಬಗೆಗೆ ಖಂಡಿತಾ ಗೊತ್ತಿರುತ್ತದೆ. ಸತ್ಯಸಾಯಿ ವಿದ್ಯಾಕೇಂದ್ರದ ಹಿನ್ನಲೆಯಲ್ಲಿ ಆ ಊರಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆಯೆಂದರೂ ತಪ್ಪಲ್ಲ. ಆದರೆ ಒಂದು ಕಾಲದಲ್ಲಿ ಬಹಳ ಅಂದರೆ ಬಹಳ ಕುಗ್ರಾಮವೆನಿಸಿದ್ದ ಪ್ರದೇಶ ಅದು. ವಿದ್ಯಾಕೇಂದ್ರ, ಸಾಯಿಬಾಬಾ ಕೃಪೆಯಿಂದ ದತ್ತವಾದ ಒಳ್ಳೆಯ ಆಸ್ಪತ್ರೆ, ಒಂದು ಬ್ಯಾಂಕು ಬಿಟ್ಟರೆ ಈಗಲೂ ಅಳಿಕೆಯಲ್ಲಿ ವಿಶೇಷ ಅನಿಸುವಂತಹ ಯಾವುದೇ ಸಂಗತಿಗಳು ಇಲ್ಲ. ಆದರೆ ಇಂಥ ಅಳಿಕೆಯಲ್ಲಿ ತೆಂಕುತಿಟ್ಟಿನ ಯಕ್ಷಪರಂಪರೆಗೇ ಒಂದು ಅಚ್ಚಳಿಯದ ನೆನಪನ್ನು ಬಿಟ್ಟುಹೋದ ಕಲಾವಿದನೊಬ್ಬನಿದ್ದನೆಂದರೆ ನಂಬಲೇಬೇಕು! ಹೌದು ಅಪ್ರತಿಮ ಕಲಾವಿದ ರಾಮಯ್ಯ ರೈ ಇದೇ ಅಳಿಕೆಯವರು!

ಹಿರಿಯ ಯಕ್ಷಕಲಾಭಿಮಾನಿಗಳಿಗೆ ಈಗಲೂ ಗೊತ್ತಿರಬಹುದು. ಅಳಿಕೆ ರಾಮಯ್ಯ ರೈಗಳೆಂದರೆ ಅಲ್ಲೊಂದು ಗತ್ತು ಇರುತ್ತಿತ್ತು. ಅವರು ರಂಗಕ್ಕೆ ಬರುವಾಗ ಅದೆಷ್ಟು ಮಂದಿ ರೋಮಾಂಚಿತರಾಗುತ್ತಿದ್ದರೋ ಗೊತ್ತಿಲ್ಲ. ಅವರ ಹಾವಭಾವ ಅದಕ್ಕಿಂತ ಮುಖ್ಯವಾಗಿ ಅವರ ಅಭಿನಯ ಆ ನಿಶೆಯಲ್ಲಿ ನೆರೆದಿದ್ದವರೆಲ್ಲಾ ನಶೆಯೇರಿಸುತ್ತಿತ್ತು. ರಾಮಯ್ಯ ರೈಗಳು ಅದೆಷ್ಟು ಅಭಿಮಾನಿಗಳನ್ನು ಹೊಂದಿದ್ದರೋ ಅವರಿಗೇ ಲೆಕ್ಕವಿದ್ದಿರಲಿಕ್ಕಿಲ್ಲ. ಅವರು ಇದ್ದಾರೆಂದೇ, ಅವರ ವೇಷ ನೋಡಲಿಕ್ಕೆಂದೇ ಅನೇಕ ಮಂದಿ ಆ ದಿನಗಳಲ್ಲಿ ಯಕ್ಷಗಾನಕ್ಕೆ ತೆರಳುತ್ತಿದ್ದರೆಂದು ಹಿರಿಯರು ಸುಮ್ಮನೆ ಹೇಳಲಿಕ್ಕಿಲ್ಲ ಬಿಡಿ. ಅಂಥ ಕಲಾವಿದ ಶ್ರೇಷ್ಟ ಅವರು.

ದಾಮೋದರ ಮಂಡೆಚ್ಚರ ಭಾಗವತಿಕೆಯಲ್ಲಿ ಋತುಪರ್ಣನಾಗಿ ಅಳಿಕೆ ರಾಮಯ್ಯ ರೈಗಳು, ಬಾಹುಕನಾಗಿ ಮಿಜಾರು ಅಣ್ಣಪ್ಪ, ಚೆಂಡೆಯಲ್ಲಿ ನಿಡ್ಲೆ ನರಸಿಂಹ ಭಟ್
ಸ್ವಾರಸ್ಯಕರ ಸಂಗತಿಯೇನು ಗೊತ್ತಾ? ನಿಮಗೆ ನಳದಮಯಂತಿ ಕಥೆ ಗೊತ್ತಿರಬಹುದು. ಆ ಪ್ರಸಂಗದಲ್ಲಿ ಬರುವ ಋತುಪರ್ಣ ಅರಸನ ಬಗೆಗೂ ನೀವು ಕೇಳಿರಬಹುದು. ಆ ಪಾತ್ರಕ್ಕೆ ಸರಿಯಾದ ನೆಲೆಗಟ್ಟು ಕೊಟ್ಟು, ತಮ್ಮ ಅಪೂರ್ವ ಪರಿಕಲ್ಪನೆಯ ಋತುಪರ್ಣನನ್ನು ರಂಗಸಾಕ್ಷಾತ್ಕಾರಗೊಳಿಸಿದವರು ಈ ರಾಮಯ್ಯ ರೈಗಳು. ಋತುಪರ್ಣನೆಂದರೆ ಹೀಗೆ, ಆ ಪಾತ್ರದ ಗಂಭೀರತೆ, ಅಭಿನಯ, ಮಾತುಗಾರಿಕೆ ಹೀಗಿರಬೇಕು ಅಂತ ತೋರಿಸಿಕೊಟ್ಟವರೇ ಈ ರೈಗಳು. ಕಾಡಿನ ಮಧ್ಯದಲ್ಲೂ ಅರೆಕ್ಷಣದಲ್ಲಿ ರುಚಿಕರ ಅಡುಗೆ ಸಿದ್ಧವಾದಾಗ, ತನ್ನ ಅಂಗವಸ್ತ್ರ ಬಿದ್ದ ಕ್ಷಣಾರ್ಧದೊಳಗೇ ರಥ ಊಹಿಸಲಸಾಧ್ಯ ದೂರ ಕ್ರಮಿಸಿಬಿಟ್ಟಿದೆಯೆಂದು ತಿಳಿದಾಗ ರೈಗಳ ಋತುಪರ್ಣ ಬಾಹುಕನನ್ನು ಪ್ರಶ್ನಿಸುತ್ತಿದ್ದ ರೀತಿ ಮನೋಜ್ಞವಾಗಿರುತ್ತಿತ್ತು. ಆ ಪ್ರಶ್ನೆಗಳಲ್ಲಿ ವ್ಯಕ್ತಪಡಿಸುತ್ತಿದ್ದ ಅಚ್ಚರಿ, ಬೆರಗು, ಕೌತುಕ, ರೋಮಾಂಚನ, ಚಿಂತೆ, ಸಂತಸ…ಹೀಗೆ ಎಲ್ಲವೂ ಅಚ್ಚಳಿಯದ ನೆನಪುಗಳೇ ಎನ್ನುತ್ತಾರೆ ಆ ಅದ್ಭುತವನ್ನು ಕಣ್ಣಿನಲ್ಲಿ ಕಟ್ಟಿಕೊಂಡವರು.

ಹಾಗಾಗಿ ರೈಗಳ ಋತುಪರ್ಣನನ್ನು ನೋಡಿದವರಿಗೆ ಇಂದಿನ ಯಾವುದೇ ಋತುಪರ್ಣನನ್ನು ನೋಡಿದರೂ ರೈಗಳು ಇರಬೇಕಿತ್ತೆನಿಸುತ್ತದೆ. ಕೆಲವೊಮ್ಮೆ ರೈಗಳನ್ನೇ ಕಂಡಂತಾಗುತ್ತದೆ. ಯಾಕೆಂದರೆ ಈಗ ನಾವು ರಂಗದಲ್ಲಿ ನೋಡುತ್ತಿರುವ ಬಹುತೇಕ ಋತುಪರ್ಣರು ರೈಗಳ ಕಲ್ಪನೆಗಳು! ಅವರ ಕಲ್ಪನೆಯ ಎಸಳುಗಳು ಈಗಿನ ಅನೇಕ ಋತುಪರ್ಣರಲ್ಲಿ ಅಲ್ಲಿಲ್ಲಿ ಕಾಣಿಸುತ್ತಲೇ ಇರುತ್ತವೆ. ಅವರು ಹಾಕಿಕೊಟ್ಟ ನೆಲೆಗಟ್ಟಿನಿಂದ ಹೊರಬರಲು ಇಂದಿಗೂ ಬಹಳಷ್ಟು ಋತುಪರ್ಣರಿಗೆ ಆಗಿಲ್ಲ!! ಅಂಥವರು ನಮ್ಮ ರಾಮಯ್ಯ ರೈಗಳು.

ಬರೀ ಋತುಪರ್ಣ ಅಂತಲ್ಲ. ಹನುಮಂತ, ರಾಮ, ಕೃಷ್ಣ, ಈಶ್ವರ ಮೊದಲಾದ ಪಾತ್ರಗಳ ಮೂಲಕವೂ ರೈಗಳು ಅಭಿಮಾನಿಗಳ ಮನದಂಗಳದಲ್ಲಿ ಅಜರಾಮರರಾಗಿದ್ದಾರೆ. ಆ ಎಲ್ಲಾ ಪಾತ್ರಗಳಿಗೂ ಜೀವ ತುಂಬಿ ಕಂಗೊಳಿಸುವಂತೆ ಮಾಡಿದ ಅಗ್ಗಳಿಕೆ ಅವರದ್ದು.

ಈ ತೆಂಕುತಿಟ್ಟಿನ ಯಕ್ಷಗಾನ ಎಂಥೆಂಥ ಮೇರು ಕಲಾವಿದರ ರಂಗಸ್ಥಳವಾಗಿತ್ತು ಅಲ್ವಾ?

ಎಪ್ಪತ್ತರ ತಲೆಮಾರಿನ “ಯಕ್ಷ ದಿಗ್ಗಜರು ಮತ್ತು ಯಕ್ಷ ಪೋಷಕರು ”
ಕುಳಿತವರು (ಎಡದಿಂದ ಬಲಕ್ಕೆ ): ಶ್ರೀಯುತರಾದ ನಿಡ್ಲೆ ನರಸಿಂಹ ಭಟ್, ಬೋಳಾರ ನಾರಾಯಣ ಶೆಟ್ಟಿ, ವಿಟ್ಲ ಗೋಪಾಲಕೃಷ್ಣ ಜೋಶಿ, ಎಂ. ನಾರಾಯಣ ಭಟ್ ಅಳಿಕೆ, ಬಲಿಪ ನಾರಾಯಣ ಭಾಗವತ, ಅಳಿಕೆ ರಾಮಯ್ಯ ರೈ, ಕದ್ರಿ ವಿಷ್ಣು.

ಮೊದಲ ಸಾಲಿನಲ್ಲಿ ನಿಂತವರು : ಶ್ರೀಯುತರಾದ ಎಂ. ವಾಸುದೇವ ಪ್ರಭು, ಕೆ. ಸಂಜೀವ ಶೆಟ್ಟಿ, ಗೋಪಾಲಕೃಷ್ಣ ಕುರುಪ್, ಬಣ್ಣದ ಕುಟ್ಯಪ್ಪು, ಕೋಳ್ಯೂರು ರಾಮಚಂದ್ರ ರಾವ್, ಕೆ. ವಿ. ಸುಬ್ಬಾ ರಾವ್, ಅಡ್ಕಸ್ಥಳ ನಾರಾಯಣ ಶೆಟ್ಟಿ

ನಿಂತವರಲ್ಲಿ ಕೊನೆಯ ಸಾಲು : ಶ್ರೀಯುತರಾದ ಡೊಂಬ, ಯು. ಗಂಗಾಧರ ಭಟ್, ಕೇದಗಡಿ ಗುಡ್ಡಪ್ಪ ಗೌಡ, ಪಡ್ರೆ ಕುಮಾರ ಮತ್ತು ಪಡ್ರೆ ಚಂದು





ಕೃಪೆ : http://www.noopurabhramari.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ